ಅಗ್ನಿಶಾಮಕದಳ

 ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಅದರೊಡನೆ ಹೋರಾಡಿ ಅದನ್ನು ಆರಿಸುವುದಕ್ಕೆಂದೇ ವಿಶೇಷವಾಗಿ ರಚನೆಯಾಗಿರುವ ಸಿಬ್ಬಂದಿಗೆ ಈ ಹೆಸರಿದೆ. ಸಾಮಾನ್ಯವಾಗಿ ಇಂಥ ದಳ ದೊಡ್ಡ ದೊಡ್ಡ ಪಟ್ಟಣಗಳಲ್ಲಿದ್ದು ತನ್ನ ಸೇವೆಯನ್ನು ಪಟ್ಟಣಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಿಗೂ ವಿಸ್ತರಿಸುತ್ತದೆ. ಆಕಸ್ಮಿಕದಿಂದ ಉಂಟಾದ ಬೆಂಕಿಯನ್ನು ಆರಿಸುವುದು ಮಾತ್ರವಲ್ಲದೆ ಇತರೆಡೆಗಳಿಗೆ ಹರಡದಂತೆಯೂ ಈ ದಳ ನೋಡಿಕೊಳ್ಳುತ್ತದೆ. ಈ ದಳದ ನೆರವಿನಿಂದಾಗಿ ಬೆಂಕಿ ಅಪಘಾತದಿಂದ ಉಂಟಾಗುವ ಪ್ರಾಣಹಾನಿ, ಆಸ್ತಿ ಪಾಸ್ತಿಗಳ ನಷ್ಟ ಕಡಿಮೆಯಾಗಲವಕಾಶವಿದೆ.

 ಬೆಂಕಿಯನ್ನಾರಿಸಲು ಮುಖ್ಯವಾಗಿ ಬಳಸುವ ವಸ್ತುವೆಂದರೆ ನೀರು, ದೊಡ್ಡ ದೊಡ್ಡ ಅಗ್ನಿಪ್ರಮಾದಗಳನ್ನು ಹತೋಟಿಗೆ ತರಲು ತಣ್ಣೀರನ್ನು ಅಧಿಕ ಪ್ರಮಾಣದಲ್ಲಿ ಬಳಸಬೇಕಾಗುತ್ತದೆ. ನೀರಿನ ಸತತಧಾರೆಯಿಂದ ಮಾತ್ರ ಇಂಥ ಅಗ್ನಿಪ್ರಮಾದಗಳನ್ನು ತಡೆಯಲು ಸಾಧ್ಯ. ಅಧಿಕ ಒತ್ತಡದಲ್ಲಿ ಮತ್ತು ಹೆಚ್ಚು ಪ್ರಮಾಣದಲ್ಲಿ ನೀರನ್ನು ಬೆಂಕಿಯ ಮೇಲೆ ಎರಚಲು ನವೀನ ರೀತಿಯ ನೀರೆತ್ತುವ ಯಂತ್ರಗಳನ್ನು ಅಗ್ನಿಶಾಮಕದಳದವರು ಬಳಸುತ್ತಾರೆ. ಬೆಂಕಿಯ ಅಪಘಾತ ಒದಗಿದ ಸ್ಥಳದ ಬಳಿ ಬಾವಿಯಾಗಲೀ ಕೆರೆಯಾಗಲೀ ಇದ್ದರೆ ಬೆಂಕಿಯನ್ನಾರಿಸುವ ಕಾರ್ಯ ಸುಲಭವಾಗುತ್ತದೆ.

 ಅಪಘಾತ ಸ್ಥಳದಲ್ಲಿ ನೀರಿನ ಸೌಕರ್ಯವಿಲ್ಲದಿದ್ದರೆ ಬೆಂಕಿಯನ್ನಾರಿಸುವುದು ಕಷ್ಟ. ಇಂಥ ಸನ್ನಿವೇಶಗಳಲ್ಲಿ ಆಧುನಿಕ ರೀತಿಯಲ್ಲಿ ತಯಾರಿಸಲಾಗಿರುವ ಬೆಂಕಿ ಆರಿಸುವ ಸಾಧನಗಳನ್ನು (ಫೈರ್ ಎಕ್ಸ್‍ಟಿಂಗ್ವಿಷರ್ಸ್) ಉಪಯೋಗಿಸಲಾಗುತ್ತದೆ. ಈ ಸಾಧನದಲ್ಲಿ ಇಂಗಾಲಾಮ್ಲ ಅನಿಲವನ್ನು ಉತ್ಪಾದಿಸಿ ಅದನ್ನು ಬೆಂಕಿ ಎಡೆಗೆ ಎರಚುವುದರಿಂದ ಬೆಂಕಿಯನ್ನು ಶಮನ ಮಾಡಬಹುದು. ಈ ತರದ ಆರಿಸುವ ಸಾಧನವನ್ನು ಸಾಮಾನ್ಯವಾಗಿ ಕಾರ್ಖಾನೆ, ಚಿತ್ರಮಂದಿರ, ಗ್ರಂಥಾಲಯ, ಪ್ರಯೋಗಾಲಯ ವಸ್ತುಸಂಗ್ರಹಾಲಯ ಮುಂತಾದೆಡೆಗಳಲ್ಲಿ ಇಟ್ಟಿರುತ್ತಾರೆ. ಗ್ಯಾಸೊಲಿನ್, ಆಲ್ಕೊಹಾಲ್, ಎಣ್ಣೆ, ಬಣ್ಣ ಮತ್ತು ವಿದ್ಯುಚ್ಛಕ್ತಿಯಿಂದುಂಟಾದ ಬೆಂಕಿಯನ್ನು ಆರಿಸಲು ಇಂಥ ಉಪಕರಣವನ್ನುಪಯೋಗಿಸುತ್ತಾರೆ. ಇದಲ್ಲದೆ ಕೆಲವು ರಾಸಾಯನಿಕ ಮಾರ್ಜಕಗಳನ್ನು ನೀರಿಗೆ ಬೆರೆಸಿ, ಕಾಡುಗಿಚ್ಚು ಮತ್ತು ಇತರ ಸಾಮಾನ್ಯ ಬೆಂಕಿ ಪ್ರಮಾದಗಳನ್ನು ಆರಿಸುತ್ತಾರೆ. ದ್ರವರೂಪದ ಕಾರ್ಬನ್ ಟೆಟ್ರಾಕ್ಲೋರೈಡ್ ಸಹ ಬಳಕೆಯಲ್ಲಿದೆ.

 ಅಗ್ನಿಶಾಮಕದಳದವರು ಉಪಯೋಗಿಸುವ ಮುಖ್ಯವಸ್ತುಗಳಲ್ಲಿ ದಪ್ಪನೆಯ ಹಗ್ಗ, ಬಲೆ, ಮರದ ಹಾಗೂ ನೂಲೇಣಿ, ದಪ್ಪ ಬಟ್ಟೆಯಿಂದ ಮಾಡಿರುವ ಕೊಳವೆಗಳು ಸೇರಿವೆ. ಜೊತೆಗೆ ನೀರೆತ್ತುವ ಯಂತ್ರಗಳು, ಶೋಧನಾ ದೀಪದ ಸಾಮಗ್ರಿಗಳು, ರಕ್ಷಣಾ ವಾಹನಗಳು, ನೀರಿನ ದೊಡ್ಡ ತೊಟ್ಟಿಗಳು, ರಕ್ಷಣಾ ಆಯುಧಗಳು ಮತ್ತು ಆಸ್ಪತ್ರೆ ಗಾಡಿ (ಆ್ಯಂಬುಲೆನ್ಸ್ ವ್ಯಾನ್)-ಇವುಗಳು ಇರುತ್ತವೆ. ತಾವು ಅಗ್ನಿಶಾಮಕದಳದವರೆಂಬುದನ್ನು ಸೂಚಿಸಲು ಸಾಮಾನ್ಯವಾಗಿ ತಮ್ಮ ವಾಹನ ಇತ್ಯಾದಿಗಳಿಗೆ ಕೆಂಪುಬಣ್ಣವನ್ನು ಬಳಿದಿರುತ್ತಾರೆ. ಬೆಂಕಿ ಅಪಘಾತದ ಕರೆ ಬಂದರೆ, ಸದಾಸಿದ್ಧರಾಗಿರುವ ಈ ದಳದವರು ತಮ್ಮ ಅಗ್ನಿಶಾಮಕ ಯಂತ್ರಗಳನ್ನು ಮತ್ತು ಇತರ ಸಾಧನಗಳನ್ನು ತಮ್ಮದೇ ಆದ ವಿಶೇಷ ರೀತಿಯ ವಾಹನಗಳಲ್ಲಿರಿಸಿಕೊಂಡು ಆ ಸ್ಥಳಕ್ಕೆ ಧಾವಿಸುತ್ತಾರೆ. ದಾರಿಯಲ್ಲಿ ಹೋಗುವಾಗ ರಸ್ತೆಯಲ್ಲಿ ಸಂಚರಿಸುವ ಎಲ್ಲ ಜನ ಮತ್ತು ಇತರ ಎಲ್ಲ ವಾಹನಗಳೂ ಅವರ ವಾಹನಕ್ಕೆ ಮೊದಲು ಅವಕಾಶ ಮಾಡಿಕೊಟ್ಟು ಆದ್ಯತೆ ನೀಡಬೇಕು. ತಮ್ಮ ವಾಹನ ಆಗಮಿಸುತ್ತಿರುವುದನ್ನು ಸೂಚಿಸಲು ದಳದವರು ಒಂದು ಗಂಟೆಯನ್ನು ಎಡೆಬಿಡದೆ ಬಾರಿಸುತ್ತ ಹೋಗುತ್ತಾರೆ. ಇದಲ್ಲದೆ ವಾಹನದ ಮೇಲೆ ಸತತವಾಗಿ ಹತ್ತಿ ಆರುವ ಪ್ರಕಾಶಮಾನವಾದ ಕೆಂಪು ಅಥವಾ ನೀಲಿಬಣ್ಣದ ದೀಪವಿರುತ್ತದೆ.

 ದೊಡ್ಡ ದೊಡ್ಡ ಪಟ್ಟಣಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬೃಹತ್ ಕಾರ್ಖಾನೆಗಳಲ್ಲಿ ಉಂಟಾಗುವ ಬೆಂಕಿಯನ್ನಾರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿಶಾಮಕ ಯಂತ್ರಗಳನ್ನು ಬಳಸಿ ಹೆಚ್ಚುಕಾಲ ಹೋರಾಡಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಅಕ್ಕಪಕಬಳಸಿ ಹೆಚ್ಚುಕಾಲ ಹೋರಾಡಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಅಕ್ಕಪಕ್ಕದ ಪಟ್ಟಣಗಳ ಅಗ್ನಿಶಾಮಕದಳದವರ ನೆರವು ಸಿಕ್ಕಿದಲ್ಲಿ ಅಗ್ನಿಶಮನಕಾರ್ಯ ತ್ವರಿತಗೊಳ್ಳುತ್ತದೆ. ಕೆಲವು ದೊಡ್ಡ ದೊಡ್ಡ ಕಾರ್ಖಾನೆಗಳು ತಮ್ಮದೇ ಆದ ಅಗ್ನಿಶಾಮಕ ಯಂತ್ರಗಳನ್ನು ಹೊಂದಿರುತ್ತದೆ.

 ಬೆಂಕಿ ಅಪಘಾತ ಸಂಭವಿಸಿದಾಗ ಗೊಂದಲಕ್ಕವಕಾಶ ಮಾಡಿಕೊಡದೆ ಶಾಂತರೀತಿಯಿಂದ ಶಮನಕಾರ್ಯದಲ್ಲಿ ಸಹಕರಿಸಿದಲ್ಲಿ ಕಾರ್ಯ ಸುಗಮವಾಗುತ್ತದೆ ಎಂಬುದೇ ಅಗ್ನಿಶಾಮಕದಳದವರು ಸಾರ್ವಜನಿಕರಿಗೆ ನೀಡುವ ಆದೇಶ.

(ಎಸ್.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ